ತಿಯಾಸೊಫಿ ಪಂಥ  - 
	ತಿಯಾಸೊಫಿ ಎಂದರೆ ಬ್ರಹ್ಮಜ್ಞಾನ, ಬ್ರಹ್ಮವಿದ್ಯೆ. ಸರ್ವಶಕ್ತನೂ ಸರ್ವಜ್ಞನೂ ಸರ್ವವ್ಯಾಪಿಯೂ ಸರ್ವಪ್ರಕಾಶನೂ ಸರ್ವಾಂತರ್ಯಾಮಿಯೂ ಆದ ದೇವನೇ ಬ್ರಹ್ಮ. ಆತನೊಬ್ಬನೇ. ಆತನ ಮತ್ತು ನಮ್ಮ ಸ್ವರೂಪವನ್ನರಿತು, ಆತನಿಗೂ ನಮಗೂ ಪ್ರಪಂಚಕ್ಕೂ ಇರುವ ಸಂಬಂಧವನ್ನು ತಿಳಿದರೆ ಸರ್ವಮತಸಮ್ಮತವಾದ ಮುಕ್ತಿ ಲಭ್ಯ. ಈ ಸರ್ವ ದಾರ್ಶನಿಕ ಗೂಢತತ್ತ್ವವನ್ನು ಜಾತಿ, ಕುಲ, ಸ್ತೀಪುರುಷ ಭೇದವಿಲ್ಲದೆ ಎಲ್ಲರಿಗೂ ಬ್ರಹ್ಮಜ್ಞಾನಿಗಳ, ಸಿದ್ಧಪುರುಷರ, ಅದೃಶ್ಯ ಮಹನೀಯರ ಮೂಲಕ ಉಪದೇಶಿಸಿ ಪ್ರಚಾರಪಡಿಸುವುದೇ ಈ ತಿಯಾಸೊಫಿ ಪಂಥದ (ಬ್ರಹ್ಮವಿದ್ಯಾ ಸಮಾಜದ) ಮುಖ್ಯ ಧ್ಯೇಯ. ಈ ಚಳವಳಿಯ ಆರಂಭದಿಂದ ಇದಕ್ಕಾಗಿ ಕೆಲಸ ಮಾಡಿದವರೆಲ್ಲರೂ ಆತ್ಮ ಅಮರನೆಂದೂ ಪ್ರತಿಯೊಬ್ಬ ಆತ್ಮನೂ ಕ್ರಮಿಕವಾಗಿ ವಿಕಾಸಹೊಂದಿ ಸಿದ್ಧಪುರುಷನಾಗಬಲ್ಲನೆಂದೂ ಅನೇಕ ಸಿದ್ಧಪುರುಷರು, ಅಭಿಜ್ಞರು ಅದೃಶ್ಯರಾದ ದಿನದಿಂದಲೂ ಇದ್ದೇ ಇರುವರೆಂದೂ ಅವರ ಬಲದಿಂದಲೂ ಉಪದೇಶದಿಂದಲೂ ಪ್ರಪಂಚ ನಡೆಯುತ್ತಿರುವುದೆಂದೂ ನಂಬಿದ್ದಾರೆ. ಇಂಥ ನಂಬಿಕೆಯಿದ್ದವರಲ್ಲಿ ಮುಖ್ಯಳಾದವಳು ರಷ್ಯದ ಎಚ್. ಪಿ. ಬ್ಲವ್ಯಾಟ್ಸ್‍ಕೀ, ಈಕೆ ಟಿಬೆಟ್ಟಿನ ಗುರುಗಳ ಉಪದೇಶ ಮತ್ತು ಪ್ರೇರಣೆಯ ಮೇಲೆ ಈ ಚಳವಳಿಯನ್ನು ಆರಂಭಿಸಿ ಬೆಳೆಸಿದಳು. 

	ಆರಂಭದಲ್ಲಿ ಈ ಚಳವಳಿ ಶ್ವೇತ ಭ್ರಾತೃಮಂಡಲದ ಕೆಲವು ಅಭಿಜ್ಞರ ಮತ್ತು ಗುಹ್ಯತತ್ತ್ವಗಳಲ್ಲಿ ದೀಕ್ಷೆಹೊಂದಿದವರ ನೇತೃತ್ವದಲ್ಲಿತ್ತು. ಈಜಿಪ್ಟಿನ ಗುರು ಸೆರಾಫಿಸ್ ಬೇ ಎಂಬಾತ ಕರ್ನಲ್ ಅಲ್ಕಾಟ್ ಮತ್ತು ಬ್ಲವ್ಯಾಟ್ಸ್ ಕೀಗಳಿಗೆ ಉಪದೇಶವಿತ್ತ; ಆದರೆ ಮಹದ್ಯೋಗಶಕ್ತಿಯುಳ್ಳವಳಾಗಿದ್ದರೂ ಬ್ಲವ್ಯಾಟ್ಸ್‍ಕೀ ಅದೃಶ್ಯ ಗುರುಗಳ ಆಜ್ಞೆಯನ್ನೂ ಪಡೆದು ಅಲ್ಕಾಟನ ಸಹಾಯವನ್ನೂ ಹೊಂದಿ, 1875ರಲ್ಲಿ ಈ ಬ್ರಹ್ಮಜ್ಞಾನಬೋಧೆಯನ್ನು ಆರಂಭಿಸಿದಳು. ಅಲ್ಕಾಟ್ ದಿವ್ಯಜ್ಞಾನ ಸಮಾಜವನ್ನು ಸ್ಥಾಪಿಸಿ. ಅದಕ್ಕೆ ಅನೇಕ ಸದಸ್ಯರನ್ನು ಕೂಡಿಸಿದ. 1876ರಲ್ಲಿ ಸಮಾಜ ಒಂದು ಗುಹ್ಯಸಂಘವಾಗಿ ಸದಸ್ಯರ ದೀಕ್ಷೆ ಕಡ್ಡಾಯವಾಗಿ ಪಡೆಯಬೇಕೆಂಬ ನಿರ್ಬಂಧ ಬಂತಲ್ಲದೆ ಸದಸ್ಯತ್ವದಲ್ಲಿ ಮೂರು ಶ್ರೇಣಿಗಳು ಏರ್ಪಟ್ಟವು. 

	ಬ್ಲವ್ಯಾಟ್ಸ್‍ಕೀಯ ಐಸಿಸ್ ಅನ್‍ವೇಲ್ಡ್ ಎಂಬ ಗ್ರಂಥ ಅಚ್ಚಾಗಿ ಹೊರಬಿದ್ದಾಗ ಅದನ್ನು ಓದಿ ಪ್ರಭಾವಿತರಾದ ಭಾರತೀಯ ಶ್ರೀಮಂತರನೇಕರು ಆ ಸಮಾಜದ ಸದಸ್ಯರಾದರು. ತತ್ತ್ವಗಳಲ್ಲಿ ಹೋಲಿಕೆ ಇದ್ದುದರಿಂದ ಬ್ರಹ್ಮಜ್ಞಾನ ಸಮಾಜದವರು ಆರ್ಯಸಮಾಜದವರೊಡನೆ ಕಲೆತು ಕೆಲಸಮಾಡಲೊಪ್ಪಿದರು. 1878 ರಲ್ಲಿ ಅಲ್ಕಾಟ್ ಸಮಾಜದ ಕೇಂದ್ರ ಕಚೇರಿಯನ್ನು ಭಾರತಕ್ಕೆ ವರ್ಗಾಯಿಸಲು ಗುರುವಿನ ಒಪ್ಪಿಗೆ ಪಡೆದು ಮುಂಬಯಿಗೆ ಬಂದು (1879) ಅಲ್ಲಿ ಕೆಲವು ಕಾಲ ಇದು ಬ್ರಹ್ಮಜ್ಞಾನಿಯೆಂಬ ಪತ್ರಿಕೆಯನ್ನಾರಂಭಿಸಿದ. ಚಳವಳಿ ಭಾರತದಲ್ಲಿ ಬಹು ಬೇಗ ಬಲಗೊಂಡು ಪ್ರಸರಿಸಿತು. 

	1882ರಲ್ಲಿ ಬ್ಲವ್ಯಾಟ್ಸ್‍ಕೀ ಹಾಗೂ ಅಲ್ಕಾಟರು ಮದ್ರಾಸಿನ ಅಡ್ಯಾರ್ ಪ್ರದೇಶವನ್ನು ಬೆಲೆಗೆ ಕೊಂಡು ಅಲ್ಲಿ ಸಮಾಜವನ್ನು ಸ್ಥಾಪಿಸಿದರು. 1884 ರಲ್ಲಿ ಇವರು ಜರ್ಮನಿಗೆ ಹೋಗಿ ಅಲ್ಲೂ ತಮ್ಮ ಸಮಾಜವನ್ನು ಸ್ಥಾಪಿಸಿದರು. ಇಂಗ್ಲೆಂಡಿನ ಲೆಡ್‍ಬೇಟರ್ ಎಂಬಾತ ಸಿನ್ನೆಟ್ ಎಂಬಾತನ ಅಕಲ್ಟ್ ವಲ್ರ್ಡ್ (ಅತೀಂದ್ರಿಯ ಲೋಕ) ಎಂಬ ಗ್ರಂಥದಿಂದ ಪ್ರಭಾವಿತನಾಗಿ ಅಡ್ಯಾರಿಗೆ ಬಂದು ಸೇವಾನಿರತನಾದ, ಬ್ಲವ್ಯಾಟ್ಸ್‍ಕೀ ಆದರೋ ಲಂಡನ್ನಿನಲ್ಲಿ ನೆಲಸಿ (1887) ಸಮಾಜವನ್ನು ಬೆಳೆಸಿದಳು. 1889 ರಲ್ಲಿ ಸುಪ್ರಸಿದ್ಧ ದೇಶಾಭಿಮಾನಿ ಆ್ಯನಿಬೆಸೆಂಟ್ ಇದಕ್ಕೆ ಸದಸ್ಯಳಾದಳು. ಅತ್ತ ಬ್ಲವ್ಯಾಟ್ಸ್‍ಕೀ ತನ್ನ ಹೆಸರಿನಲ್ಲಿ ಸಂಘವೊಂದನ್ನು ಸ್ಥಾಪಿಸಿ ಅದರ ರಹಸ್ಯ ಶಾಖೆಯನ್ನು (ಎಸೊಟೆರಿಕ್ ಬ್ರ್ಯಾಂಚ್) ಆರಂಭಿಸಿದಳು. ಸಮಾಜದ ಚಳವಳಿ ಹೆಚ್ಚಿತು. ಬೆಸೆಂಟ್ 1893 ರಲ್ಲಿ ಷಿಕಾಗೋವಿನ ಸರ್ವಮತ ಪ್ರತಿನಿಧಿ ಸಭೆಯಲ್ಲಿ ಬ್ರಹ್ಮಜ್ಞಾನದ ಪರ ವಾದಿಸಿದಳು. 

	ಈ ಸಮಾಜ ಕಾರ್ಯಗಳು ಈಗ ಅಡ್ಯಾರ್ ಗ್ರಂಥಭಂಡಾರದಲ್ಲಿ ನಡೆಯುತ್ತವೆ. ಇಲ್ಲಿನ ಗ್ರಂಥ ಭಂಡಾರ ದೊಡ್ಡದು. ಅನೇಕ ಪ್ರಾಚೀನ ಗ್ರಂಥಗಳು ಇಲ್ಲಿ ಅಚ್ಚಾಗುತ್ತಿವೆ. ಇಲ್ಲೊಂದು ಸುಪ್ರಸಿದ್ಧ ಕಲಾಕ್ಷೇತ್ರವಿದೆ. ಬ್ರಹ್ಮವಿದ್ಯೆಯೆಂಬ ಪತ್ರಿಕೆ ಪ್ರಕಟವಾಗುತ್ತಿದೆ. ಈ ಸಮಾಜದ ಶಾಖೋಪಶಾಖೆಗಳು ಭಾರತ, ಯರೋಪ್, ಅಮೆರಿಕ, ಆಫ್ರಿಕ, ಆಸ್ಟ್ರೇಲಿಯ, ಜರ್ಮನಿ ಶ್ರೀಲಂಕಾ ಮೊದಲಾದ ಸ್ಥಳಗಳಲ್ಲಿ ವ್ಯಾಪಿಸಿವೆ. ಎಲ್ಲ ಮತೀಯರೂ ಈ ಸಮಾಜಕ್ಕೆ ಸದ್ಯರಾಗಿದ್ದಾರೆ. 

	ಈ ಸಮಾಜದ ಮುಖ್ಯ ಉದ್ದೇಶಗಳು ಈ ರೀತಿಯಿವೆ : 1. ಲೋಕದ ಜನರಲ್ಲಿ ಪರಸ್ಪರ ಸೌಹಾರ್ದವನ್ನುಂಟುಮಾಡಿ, ವಿಶ್ವಭ್ರಾತೃಭಾವವನ್ನು ಬೆಳೆಸುವುದು. 2. ವಿವಿಧ ಮತ ಮತ್ತು ಶಾಸ್ತ್ರಗ್ರಂಥಗಳನ್ನೂ ವಿಜ್ಞಾನಶಾಸ್ತ್ರ ಗ್ರಂಥಗಳನ್ನೂ ಯಾವ ಪಕ್ಷಪಾತವೂ ಇಲ್ಲದಂತೆ ಅಧ್ಯಯನಮಾಡಿ, ತುಲನೆ ಮಾಡಿ, ಅವುಗಳ ಸಾರಾಂಶವನ್ನು ತಿಳಿದುಕೊಳ್ಳುವುದು. 3. ಅಪೂರ್ವ ತತ್ತ್ವವಿಚಾರ; ಗಹನವಾಗಿರುವ ಆಧ್ಯಾತ್ಮ ವಿಷಯಗಳನ್ನೂ ಮಾನವನಲ್ಲಿ ಅಡಗಿರುವ ಅತ್ಯದ್ಭುತ ಶಕ್ತಿಗಳನ್ನೂ ಕೂಲಕಂಷವಾಗಿ ವಿಮರ್ಶಿಸಿ ಕಂಡು ಹಿಡಿಯುವುದು ಮತ್ತು ಅತೀಂದ್ರಿಯ ಶಕ್ತಿಗಳನ್ನು ವೃದ್ಧಿಪಡಿಸುವುದು. 

	(ನೋಡಿ- ಆನಿ-ಬೆಸೆಂಟ್) 							(ಎಚ್.ಆರ್.ಆರ್.ಐ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ